ಅಡಿಗೆ ಉಪ್ಪು

ಸಾಮಾನ್ಯವಾಗಿ ಉಪ್ಪು ಎಂದು ಚಿರಪರಿಚಿತವಾದ ಈ ವಸ್ತು ಸೋಡಿಯಂ ಕ್ಲೋರೈಡ್ ಎಂಬ ರಾಸಾಯನಿಕ ಸಂಯುಕ್ತ. ಇದರ ಅಣುಸೂತ್ರ NaCl 804º ಸೆಂ.ಗ್ರೇ. ಉಷ್ಣತೆಯಲ್ಲಿ ಕರಗುತ್ತದೆ. ದ್ರವಿತವಸ್ತು 1413º ಸೆಂ.ಗ್ರೇ. ಉಷ್ಣತೆಯಲ್ಲಿ ಕುದಿಯುತ್ತದೆ. ಕಲ್ಲುಪ್ಪಿನ (ರಾಕ್‍ಸಾಲ್ಟ್) ರೂಪದಲ್ಲಿ ಇದು ಪ್ರಕೃತಿಯಲ್ಲಿ ಹೇರಳವಾಗಿ ದೊರೆಯುತ್ತದೆ. ಸಮುದ್ರದ ನೀರಿನಲ್ಲಿ ಸುಮಾರು 3% ರಷ್ಟು ಇದು ಸೇರಿಕೊಂಡಿದೆ. ಉಪ್ಪುನೀರಿನ ಚಿಲುಮೆ ಮತ್ತು ಸರೋವರಗಳೂ ಉಂಟು. ಶತಮಾನಗಳ ಕಾಲಾವಧಿಯಲ್ಲಿ ಇಂಥ ಸರೋವರದ ನೀರು ಇಂಗಿ, ಕಲ್ಲುಪ್ಪಿನ ಗಣಿಗಳು ರೂಪುಗೊಂಡಿವೆಯೆಂದು ಭಾವಿಸಲಾಗಿದೆ. ವಿಶ್ವದಲ್ಲೇ ಅತಿ ದೊಡ್ಡ ಕಲ್ಲುಪ್ಪಿನ ಗಣಿ ಅಮೆರಿಕ ಸಂಯುಕ್ತಸಂಸ್ಥಾನದಲ್ಲಿದೆ. 
	
ಉಪ್ಪನ್ನು ತಯಾರಿಸಲು ಮೂರು ಮುಖ್ಯ ವಿಧಾನಗಳಿವೆ. 1 ಸಮುದ್ರದ ನೀರಿನಿಂದ: ಮದ್ರಾಸ್ ಮತ್ತು ಬೊಂಬಾಯಿ-ಇವುಗಳೇ ಭಾರತದ ಪ್ರಮುಖ ಉಪ್ಪುತಯಾರಿಕಾ ಕೇಂದ್ರಗಳು. ಭಾರತದಲ್ಲಿ ಇದರ ವಾರ್ಷಿಕ ಉತ್ಪಾದನೆ ಸುಮಾರು 5 ಲಕ್ಷ ಟನ್ನುಗಳು. ತೇವವಾದ ಹವೆ ಮತ್ತು ಗಂಗ, ಬ್ರಹ್ಮಪುತ್ರ, ಇರವಾಡಿ ನದಿಗಳು ಸಮುದ್ರಕ್ಕೆ ಒಯ್ಯುವ ಹೊಸ ಹಾಗೂ ಸಿಹಿ ನೀರಿನ ದೆಸೆಯಿಂದಾಗಿ ಬಂಗಾಳ ಮತ್ತು ಬರ್ಮಾಗಳಲ್ಲಿ ಉಪ್ಪಿನ ಕೈಗಾರಿಕೆ ಸಾಧ್ಯವಾಗಿಲ್ಲ. ಇತರ ಉಷ್ಣ ದೇಶಗಳಂತೆ ಭಾರತದಲ್ಲೂ ಸಮುದ್ರದ ನೀರನ್ನು ಸೂರ್ಯನ ಶಾಖದಿಂದ ಇಂಗಿಸಿ ಉಪ್ಪನ್ನು ಪಡೆಯಲಾಗುತ್ತದೆ. ಸಮುದ್ರತೀರದಲ್ಲಿ ಅದರ ಹಿನ್ನೀರಿಗೆ (ಬ್ಯಾಕ್-ವಾಟರ್) ಹೊಂದಿಕೊಂಡಂತೆ ಅನುಕೂಲವಾದ ಪ್ರದೇಶವನ್ನು ಆಯ್ಕೆಮಾಡಿಕೊಂಡು ಮಣ್ಣಿನ ಅಡ್ಡಗಟ್ಟೆಗಳನ್ನು ಹಾಕಿ, ವಿವಿಧ ಮಟ್ಟದ ಕೊಳಗಳನ್ನು ನಿರ್ಮಿಸಲಾಗುವುದು. ಇವುಗಳ ನಡುವೆ ಕಾಲುವೆಗಳ ಮೂಲಕ ಸಂಪರ್ಕವಿರುತ್ತದೆ. ಸಮುದ್ರದ ನೀರನ್ನು ಹೆಚ್ಚು ಆಳವಾಗಿರುವ ಕೊಳಗಳಿಗೆ ಹಾಯಿಸಲಾಗುವುದು. ಈ ಕೊಳಗಳಲ್ಲಿ ಹಲವು ದಿನಗಳವರೆಗಿರುವ ನೀರು ಸೂರ್ಯನ ತಾಪದಿಂದ ಭಾಗಶಃ ಆವಿಯಾಗಿ, ಉಪ್ಪಿನ ದ್ರಾವಣ ಸಾಂದ್ರೀಕರಿಸುತ್ತದೆ. ಅನಂತರ ಈ ದ್ರಾವಣವನ್ನು ಒಳಭಾಗದ ಅಷ್ಟು ಆಳವಲ್ಲದ ಕಟ್ಟೆಗಳಿಗೆ ರವಾನಿಸುತ್ತಾರೆ. ಕಾಲಕ್ರಮದಲ್ಲಿ ಉಪ್ಪು ಹರಳಿನ ರೂಪದಲ್ಲಿ ಹೊರಬೀಳುತ್ತದೆ. ಹರಳುಗಳನ್ನು ಕೆರೆದು, ಹೊರತೆಗೆದು, ಜರಡಿ ಹಿಡಿದು, ದಪ್ಪ ಮತ್ತು ಸಣ್ಣ ಹರಳುಗಳಾಗಿ ವಿಂಗಡಿಸಿ ಅನಂತರ ಮಾರಾಟಕ್ಕಿಡುತ್ತಾರೆ. ಅಡಿಗೆಗೆಂದು ನಾವು ಬಳಸುವ ಉಪ್ಪಿನ 60%ರಷ್ಟು ಹೀಗೆ ಒದಗುತ್ತದೆ. ಫ್ರಾನ್ಸ್, ಇಟಲಿ, ಸ್ಪೇನ್, ಪೋರ್ಚುಗಲ್ ಮತ್ತು ಚೀನ ದೇಶಗಳಲ್ಲೂ ಅಮೆರಿಕ ಸಂಯುಕ್ತಸಂಸ್ಥಾನದ ಕ್ಯಾಲಿಫೋರ್ನಿಯಾದಲ್ಲೂ ಈ ವಿಧಾನ ರೂಢಿಯಲ್ಲಿದೆ. ಶೀತ ಪ್ರದೇಶಗಳಾದ ರಷ್ಯ ಮತ್ತು ಇಂಗ್ಲೆಂಡ್‍ನಲ್ಲಿ ಸಮುದ್ರದ ನೀರನ್ನು ಹೆಪ್ಪುಗಟ್ಟಿಸುವ ವಿಧಾನ ಬಳಕೆಯಲ್ಲಿದೆ. ಈ ಕ್ರಮದಿಂದಾಗಿ ಉಪ್ಪಿನ ಸಾಂದ್ರದ್ರಾವಣ ದೊರೆಯುತ್ತದೆ. ಇದನ್ನು ಇಂಗಿಸಿ ಉಪ್ಪಿನ ಹರಳುಗಳನ್ನು ಪಡೆಯುತ್ತಾರೆ. 2 ಉಪ್ಪಿನ ಸರೋವರಗಳಿಂದ ಮತ್ತು ಭೂಗತ ನೀರಿನಿಂದ: ದೇಶೀಯ ಉಪ್ಪಿನ 30% ಭಾಗ ಈ ವಿಧಾನದಿಂದ ತಯಾರಾಗುತ್ತದೆ. ಕಚ್ (ರನ್-ಆ¥sóï-ಕಚ್) ಪ್ರದೇಶದ ಲವಣ ಸಂಗ್ರಹದ ಮೇಲೆ ಹಿಂದೆ ವೇಗವಾಗಿ ಬೀಸಿದ ಗಾಳಿಯೊಡನೆ ತೂರಿಬಂದ ಉಪ್ಪಿನ ಧೂಳು ರಾಜಾಸ್ಥಾನದ ಮರಳುಗಾಡಿನಲ್ಲಿ ಶೇಖರವಾದಂತೆ ತೋರುತ್ತದೆ. ಇಲ್ಲಿರುವ ಸಾಂಬಾರ್ ಲವಣಸರೋವರದ ವಿಸ್ತೀರ್ಣ ಮಳೆಗಾಲದಲ್ಲಿ ಸುಮಾರು 90 ಚ.ಮೈ. ಆಗುತ್ತದೆ. ಇದೇ ರಾಜ್ಯದ ಪಚ್‍ಬಿದ್ರ ಎಂಬಲ್ಲಿ ಭೂಗತ ಉಪ್ಪುನೀರನ್ನು ಮೇಲೆತ್ತಿ ಉಪ್ಪಿಗಾಗಿ ಸಾಂದ್ರೀಕರಿಸುತ್ತಾರೆ. ಈ ವಿಧಾನದಲ್ಲಿನ ಬಾಷ್ಪೀಕರಣಕ್ಕೆ ನಾನಾ ಬಗೆಯ ಪರಿಣಾಮತಂತ್ರವನ್ನಾಗಲೀ (ಮಲ್ಟಿಪಲ್ ಇಫೆಕ್ಟ್ ಟೆಕ್ನಿಕ್) ಅಥವಾ ಕಲ್ಲಿದ್ದಲಿನಿಂದ ಕಾಯಿಸಿದ ದೊಡ್ಡ ಬೋಗುಣಿಗಳನ್ನಾಗಲೀ ಉಪಯೋಗಿಸುವುದು ಪದ್ಧತಿ. 3 ಉಪ್ಪಿನ ಗಣಿಗಳಿಂದ : ಈ ವಿಧಾನದಿಂದ ತಯಾರಾಗುವ ಉಪ್ಪಿನ ಪ್ರಮಾಣ 10%. ತೈಲಯಂತ್ರದಿಂದ (ಆಯಿಲ್ ಎಂಜಿನ್ ಚಲಿಸುವ ಗಾಳಿಯ ಅದುಮು ಯಂತ್ರಗಳು ಲವಣ ಸಂಗ್ರಹವನ್ನು ಕೊರೆದು ಉಪ್ಪನ್ನು ಮೇಲೆತ್ತುತ್ತವೆ. ಉಪ್ಪಿನ ಹೆಂಟೆಗಳನ್ನು ಪುಡಿಮಾಡಿ, ಜರಡಿ ಹಿಡಿದು, ಹರಳುಗಳ ಗಾತ್ರಾನುಸಾರ ವಿಂಗಡಿಸಿದ ಅನಂತರವೇ ಮಾರುಕಟ್ಟೆಗೆ ಕಳುಹಲಾಗುವುದು. ಇಂಗ್ಲೆಂಡಿನ ಚೆಪೈರಿನಲ್ಲಿರುವಂತೆ, ಉಪ್ಪಿನ ಸಂಗ್ರಹ ಭೂಮಟ್ಟಕ್ಕಿಂತ ಕೆಳಗಿದ್ದರೆ ಯಂತ್ರ ನಿರ್ಮಿತ ರಂಧ್ರದ ಮೂಲಕ ನೀರನ್ನು ಹಾಯಿಸಿ, ದ್ರಾವಣರೂಪದಲ್ಲಿ ಉಪ್ಪನ್ನು ಮೇಲೆತ್ತಿ, ಅನಂತರ ಇಂಗಿಸಿ, ಹರಳಿನ ರೂಪಕ್ಕೆ ತರಬಹುದು. 
ಶುದ್ಧೀಕರಣ : ಮಳೆಗಾಲದಲ್ಲಿ ಉಪ್ಪು ಕರಗಿಹೋಗುವ ಸಂಭವ ಹೆಚ್ಚು. ಅಶುದ್ಧ ಉಪ್ಪಿನಲ್ಲಿರುವ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಕ್ಲೋರೈಡ್-ಊಥಿgಡಿosಛಿoಠಿiಛಿ ಇವುಗಳೇ ಇದಕ್ಕೆ ಕಾರಣ. ಶುದ್ಧ ಉಪ್ಪಿಗೆ ನೀರನ್ನಾಕರ್ಷಿಸುವ ಗುಣವಿಲ್ಲ. ಆದ್ದರಿಂದ ಅಶುದ್ಧ ಉಪ್ಪನ್ನು ಅಲ್ಪಪ್ರಮಾಣದ ನೀರಿನಲ್ಲಿ ವಿಲೀನ ಮಾಡಿ ಶೋಧಿಸಿದರೆ ಅದ್ರಾವ್ಯ ವಸ್ತುಗಳಿಂದ ಉಪ್ಪು ದೂರವಾಗುತ್ತದೆ. ಹೈಡ್ರೊಜನ್ ಕ್ಲೋರೈಡ್ ಅನಿಲವನ್ನು ದ್ರಾವಣದೊಳಕ್ಕೆ ಅದು ಹೀರುವಷ್ಟು ಕಾಲ ಹಾಯಿಸಿದರೆ, ಶುದ್ಧ ಸೋಡಿಯಂ ಕ್ಲೋರೈಡ್ ಒತ್ತರಿಸುವುದು. ಅನಂತರ ಶೋಧಿಸುವುದರಿಂದ ಉಪ್ಪಿನ ಹರಳುಗಳು ಬೇರ್ಪಡುತ್ತದೆ. ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲದಿಂದ ತೊಳೆದು, ಒಣಗಿಸಿ, ಕಾಯಿಸಿದರೆ, ದ್ರಾವಣದಲ್ಲಿನ ಅಲ್ಪಸ್ವಲ್ಪ ಹೈಡ್ರೊಜನ್‍ಕ್ಲೋರೈಡ್ ಶೇಷಾಂಶವೂ ಹೋಗಿ, ಶುದ್ಧ ಉಪ್ಪು ಉಳಿಯುತ್ತದೆ. 
 	
ಗುಣಗಳು : ಉಪ್ಪು ಘನಾಕೃತಿಯ, ಬಣ್ಣವಿಲ್ಲದ ಹರಳು. ನೀರಿನಲ್ಲಿ ವಿಲೀನವಾದರೂ ಮದ್ಯಸಾರದಲ್ಲಿ ವಿಲೀನವಾಗದು. ಇದರ ದ್ರಾವಣತೆ (ಸಾಲ್ಯುಬಿಲಿಟಿ) ಉಷ್ಣತೆಯ ವ್ಯತ್ಯಾಸದಿಂದಾಗಿ ಅಷ್ಟೇನೂ ಹೆಚ್ಚಾಗುವುದಿಲ್ಲ. ಉದಾಹರಣೆಗೆ, 100 ಗ್ರಾ. ನೀರನ್ನು ಪರ್ಯಾಪ್ತಗೊಳಿಸಲು 0º ಸೆಂ.ಗ್ರೇ.ನಲ್ಲಿ 35.7 ಗ್ರಾ. ಮತ್ತು 100º ಸೆಂ.ಗ್ರೇ.ನಲ್ಲಿ ಕೇವಲ 39.8 ಗ್ರಾ. ಉಪ್ಪು ಸಾಕು. 
	
ಉಪ್ಪನ್ನು ಪ್ರಬಲ ಸಲ್ಫ್ಯೂರಿಕ್ ಆಮ್ಲದೊಡನೆ ಕಾಯಿಸಿದಾಗ ಹೈಡ್ರೊಜನ್ ಕ್ಲೋರೈಡ್, ಮ್ಯಾಂಗನೀಸ್‍ಡೈಆಕ್ಸೈಡ್, ಇದ್ದರೆ ಕ್ಲೋರಿನ್ ಅನಿಲವೂ ಬಿಡುಗಡೆಯಾಗುತ್ತದೆ. ಕೈಗಾರಿಕಾ ಪ್ರಮಾಣದಲ್ಲಿ ಹೈಡ್ರೋಜನ್ ಕ್ಲೋರೈಡ್ ತಯಾರಿಸುವುದು ಹೀಗೆಯೇ. ದ್ರವಿತ ಉಪ್ಪನ್ನು ವಿದ್ಯುದ್ವಿಭಜನೆಗೆ ಒಳಪಡಿಸಿದರೆ ಧನ ಧ್ರುವದಲ್ಲಿ ಕಲೋರಿನ್ ಋಣಧ್ರುವದಲ್ಲಿ ಸೋಡಿಯಂ ಲೋಹ ಬರುತ್ತದೆ. ಇದಕ್ಕೆ ಡೌನ್ ವಿಧಾನವೆನ್ನುವರು. ಪಾದರಸದ ಋಣದ್ರವವನ್ನು ಬಳಸಿ, ಸೋಡಿಯಂ ಕ್ಲೋರೈಡ್ ಕ್ಷಾರವೂ ಜಲಜನಕ (ಹೈಡ್ರೊಜನ್) ಮತ್ತು ಕ್ಲೋರಿನ್ ಉಪ ವಸ್ತುಗಳೂ ದೊರೆಯುತ್ತವೆ. 
	
ಉಪಯೋಗಗಳು : ಅನುದಿನದ ಆಹಾರದಲ್ಲಿ ಉಪ್ಪಿನ ಅವಶ್ಯಕತೆ ಅತ್ಯಧಿಕ. ನಿತ್ಯಬಳಕೆಯ ಅಡಿಗೆ ಉಪ್ಪಿನಲ್ಲಿರುವ ಇತರ ಪೌಷ್ಟಿಕಾಂಶಗಳ ವಿವರ ಹೀಗಿದೆ: 1% ಕ್ಯಾಲ್ಸಿಯಂ ಸಿಲಿಕೇಟ್ ಅಥವಾ ಮೆಗ್ನೀಸಿಯಂ ಕಾರ್ಬೊನೇಟ್, ಅಯೋಡೀನ್ ಕೊರತೆಯನ್ನು ನಿವಾರಿಸಲು 0.001% ಪೊಟ್ಯಾಸಿಯಂ ಅಯೊಡೈಡ್, ಇದರಲ್ಲಿರುವ ಅಯೊಡೀನ್ ಅಂಶವನ್ನು ಕಾಪಾಡಲು 0.1% ಸೋಡಿಯಂ ಕಾರ್ಬೊನೇಟ್ ಮತ್ತು ಸೋಡಿಯಂ ಥಯೋಸಲ್ಫೇಟ್, ಪ್ರಾಣಿಗಳಿಗೂ ಉಪ್ಪಿನ ಅಗತ್ಯವುಂಟು. ವನ್ಯಮೃಗ ಸಂರಕ್ಷಣಾರಣ್ಯಗಳಲ್ಲಿ (ಗೇಮ್ ಸ್ಯಾಂಕ್ಚುಅರಿ) ವಾಸಿಸುವ ಕಾಡುಪ್ರಾಣಿಗಳ ಸಲುವಾಗಿ ಆಗಿಂದಾಗ್ಗೆ ನಿಯೋಜಿತ ಸ್ಥಳಗಳಲ್ಲಿ ಉಪ್ಪನ್ನು ಚೆಲ್ಲುತ್ತಾರೆ. ಉಪ್ಪಿನಲ್ಲಿಟ್ಟ ಮೀನು, ಮಾಂಸ ಮತ್ತು ಬೆಣ್ಣೆ ಬಹುಕಾಲ ಕೆಡುವುದಿಲ್ಲ. ಅಡಿಗೆ ಸೋಡಾ (ಬೇಕಿಂಗ್ ಪೌಡರ್ ಅಥವಾ ಸೋಡಿಯಂ ಬೈಕಾರ್ಬೊನೇಟ್) ಮತ್ತು ವಾಷಿಂಗ್ ಸೋಡಾ (ಸೋಡಿಯಂ ಕಾರ್ಬೊನೇಟ್) ತಯಾರಿಸುವುದು ಉಪ್ಪಿನಿಂದಲೇ, ಸೋಡಿಯಂ ಪರ್ಮುಟೈಟ್ ಎಂಬ ರಾಸಾಯನಿಕ ವಸ್ತು ಗಡಸುನೀರನ್ನು ಮೆದುಗೊಳಿಸಿ ತಾನು ನಿಷ್ಕ್ರಿಯವಾಗುತ್ತದೆ. ಮತ್ತೆ ಉಪ್ಪಿನ ಪ್ರಬಲ ದ್ರಾವಣದಿಂದ ತೊಳೆದರೆ ಪುನಶ್ಚೇತನಗೊಳ್ಳುತ್ತದೆ. ವನಸ್ಪತಿ ತೈಲಗಳೊಡನೆ (ಹೈಡ್ರೊಜಿನೇಟಿಡ್ ಆಯಿಲ್) ಸೋಡಿಯಂ ಹೈಡ್ರ್ರಾಕ್ಸೈಡನ್ನು ಬೆರೆಸಿ ಕುದಿಸಿದರೆ ಸಾಬೂನು ಲಭಿಸುತ್ತದೆ. ಅದಕ್ಕೆ ಉಪ್ಪನ್ನು ಸೇರಿಸದ ಹೊರತು ಸಾಬೂನು ಒತ್ತರಿಸುವುದಿಲ್ಲ. ಸಂಶೋಧನೆಯೇ ಮೊದಲಾದ ವೈe್ಞÁನಿಕ ಪ್ರಯೋಗಗಳಲ್ಲಿ ಉಪ್ಪು ಮತ್ತು ಮಂಜುಗೆಡ್ಡೆಯ ಶೈತ್ಯ ಮಿಶ್ರಣ ಬಳಕೆಯಾಗುತ್ತದೆ. ಪಿಂಗಾಣಿ ಮತ್ತು ಇತರ ಮಣ್ಣಿನ ಪಾತ್ರೆ, ಕೊಳಾಯಿ, ಜಾಡಿ-ಇತ್ಯಾದಿಗಳಿಗೆ ಹೊಳಪು ಕೊಡಲು, ವೈದ್ಯದಲ್ಲಿ, ರಾಸಾಯನಿಕ ವಿಶ್ಲೇಷಣೆಯಲ್ಲಿ, ಗಾಜು, ಚರ್ಮ, ಕಾಗದ ಮತ್ತು ಬಟ್ಟೆ ಉದ್ಯಮಗಳಲ್ಲಿ ಉಪ್ಪಿನ ಬಳಕೆ ವ್ಯಾಪಕವಾಗಿದೆ.          
(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ